Skip to content
ಮುಖ ಪುಟ>> ಮಧ್ಯವರ್ತನೆ_ಸಮುದಾಯ ಸಂಚಲನ

ಸಂಕ್ಷಿಪ್ತ ಪರಿಚಯ

 

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ) ರಚನೆ,ಉದ್ದೇಶ,ಕರ್ತವ್ಯ ಹಾಗೂ ಅಧಿಕಾರಗಳು ಭಾರತ ಸರ್ಕಾರ ದಿನಾಂಕ :01.04.2010 ರ ಜಾರಿಗೆ ಬಂದಂತೆ ಹೊರಡಿಸಿದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ರ ಕಲಂ 21 ರಲ್ಲಿ ಅನುದಾನ ರಹಿತ ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಶಾಲೆಗಳಲ್ಲಿ ಶಾಲಾ ನಿರ್ವಹಣಾ ಸಮಿತಿ (School Management Committee) ರಚಿಸತಕ್ಕದ್ದೆಂದು ಆದೇಶಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012 ರ ನಿಯಮ 13 ರಲ್ಲಿ ಶಾಲಾ ಅಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಆದೇಶಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಸದರಿ ಸಮಿತಿಗಳು ಅಸ್ತಿತ್ವದಲ್ಲಿದ್ದು, ಅದೇ ಹೆಸರಿನಲ್ಲಿ ಮುಂದುವರಿಸಲಾಗಿದೆ.

ಸಮುದಾಯ ಸಂಚಲನ

ಶಿಕ್ಷಕರಿಗಾಗಿ ಸೇವಾ ಕಾಲೀನ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳು :

ಎಸ್.ಡಿ.ಎಂ.ಸಿ ಎಂದರೇನು?

ಎಸ್.ಡಿ.ಎಂ.ಸಿ ಎಂದರೆ ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಈ ಸಮಿತಿಯು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿಯ ಪರಿಷತ್ತಿನಿಂದ ಚುನಾಯಿತರಾದ ಪಾಲಕರ ಪ್ರತಿನಿಧಿಗಳು, ನಾಮನಿರ್ದೇಶಿತ ಜನಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಪದನಿಮಿತ್ತ ಸದಸ್ಯರುಗಳು, ಸಂಘ-ಸಂಸ್ಥೆ ಮತ್ತು ಸಮುದಾಯ ಸದಸ್ಯರನ್ನು ಒಳಗೊಂಡಿರುತ್ತದೆ.
ಎಸ್.ಡಿ.ಎಂ.ಸಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಭಾಗವಾಗಿ ಕಾನೂನಿನ ಚೌಕಟ್ಟಿನೊಳಗೆ ತರಲಾಗಿದೆ.

ಎಸ್.ಡಿ.ಎಂ.ಸಿ ರಚನೆಯ ಉದ್ದೇಶ :

 1. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸಲು.
 2. ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು.
 3. ತಮ್ಮ ಮಕ್ಕಳ ಏಳಿಗೆಯ ಬಗ್ಗೆ ಸದಾ ಕಾಳಜಿಯುಳ್ಳ ಪೋಷಕರು / ಪಾಲಕರು ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು.
 4. ಶಿಕ್ಷಣ ವ್ಯವಸ್ಥೆಯನ್ನು ವಿಕೇಂದ್ರಿಕರಿಸಿ ಶಾಲಾ ಆಡಳಿತವನ್ನು ಸುಧಾರಿಸಲು.
 5. ಶಿಕ್ಷಕರನ್ನು ಪ್ರೇರೇಪಿಸಿ ಅವರ ಜವಾಬ್ದಾರಿಯನ್ನು ಹೆಚ್ಚಿಸಲು.
 6. ಗ್ರಾಮ ಶಿಕ್ಷಣ ಸಮಿತಿಗಳ ರಚನೆಯಲ್ಲಿ ಉಳಿದುಕೊಂಡ ನ್ಯೂನತೆಗಳನ್ನು ಹೋಗಲಾಡಿಸಲು.
 7. ಶಾಲಾ ಯೋಜನೆ ಹಾಗೂ ಅಭಿವೃಧ್ಧಿಗಾಗಿ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಯೋಜನೆ ತಯಾರಿಸಲು.
 8. ದಾಖಲಾತಿ/ ಹಾಜರಾತಿ ಶಿಕ್ಷಣ ಗುಣಮಟ್ಟ ಸುಧಾರಣೆ ಕುರಿತಂತೆ ಇರುವ ಸಮಸ್ಯೆಗಳನ್ನು ಪರಿಹರಿಸಲು.
 9. ತರಗತಿಯ ಚಟುವಟಿಕೆಗಳನ್ನು ಶಿಸ್ತುಬಧ್ಧವಾಗಿ ಸಂಘಟಿಸಲು.
 10. ಶಾಲಾಭಿವೃಧ್ಧಿಗೆ ಅಗತ್ಯ ಸಂಪನ್ಮೂಲಗಳನ್ನು ಕ್ರೋಢೀಕರಿಸಲು.

ಎಸ್.ಡಿ.ಎಂ.ಸಿ ಯ ಅಧಿಕಾರಗಳು:

 1. ಪ್ರತಿ ತಿಂಗಳು ಮಾಸಿಕ ಸಭೆಯನ್ನು ಕೋರಂನೊಂದಿಗೆ ನಡೆಸುವುದು.
 2. ಶಾಲೆಯಲ್ಲಿ ಜಂಟಿ ಖಾತೆಯಲ್ಲಿರುವ ಹಣಕಾಸನ್ನು ಜವಾಬ್ದಾರಿಯುತವಾಗಿ ಗೊತ್ತುಪಡಿಸಿದ ಕಾರ್ಯಗಳಿಗೆ ಖರ್ಚು ಮಾಡುವುದು ಮತ್ತು ಅದಕ್ಕೆ ಸರಿಯಾದ ದಾಖಲೆಗಳನ್ನು ನಿರ್ವಹಿಸುವುದು.
 3. ಎಲ್ಲಾ ವಿದ್ಯಾರ್ಥಿಗಳ, ಬೋಧಕೇತರ ಸಿಬ್ಬಂದಿ, ಶಿಕ್ಷಕರು ಮತ್ತು ಗ್ರಾಮಸ್ಥರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ದೂರು ಪೆಟ್ಟಿಗೆಯನ್ನು ಇಡುವುದು. ಅದನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ವಾರಕ್ಕೊಮ್ಮೆ ತೆಗೆದು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
 4. ಪ್ರತಿ ಮೂರು ತಿಂಗಳಿಗೊಮ್ಮೆ ತಂದೆ ತಾಯಂದಿರ ಪರಿಷತ್ತಿನ ಸಭೆ ಆಯೋಜಿಸಿ ಶಾಲಾ ಪ್ರಗತಿ, ಮಕ್ಕಳ ದಾಖಲಾತಿ, ನಿರಂತರ ಹಾಜರಾತಿ ಮತ್ತು ಕಲಿಕೆ  ಮತ್ತು ಹಣಕಾಸಿನ ಮಾಹಿತಿಗಳನ್ನು ಹಂಚಿಕೊಳ್ಳುವುದು, ಸಭೆಯ ವರದಿಯನ್ನು ಗ್ರಾಮ ಪಂಚಾಯಿತಿಯ ಗಮನಕ್ಕೆ ತರುವುದು.
 5. ಶಾಲಾ ಸಿಬ್ಬಂದಿಯ ಸಕಾಲಿಕ ಹಾಗೂ ನಿಯಮಿತ ಹಾಜರಾತಿಯ ಮೇಲೆ ಗಮನವಿಡುವುದು.
 6. ಸದಸ್ಯರು ಶಿಕ್ಷಕರ ಹಾಜರಾತಿ ವಹಿಯನ್ನು ಶಾಲೆಯಲ್ಲಿಯೇ ಪರಿವೀಕ್ಷಿಸಿಬಹುದು.
 7. ಶಾಲಾ ಸಿಬ್ಬಂದಿಯ ಸಕಾಲಿಕ ಹಾಗೂ ನಿಯಮಿತ ಹಾಜರಾತಿಯಲ್ಲಿ ಏನಾದರೂ ದೋಷ ಕಂಡುಬಂದರೆ, ಆ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚಿಸಿ, ಗೊತ್ತುವಳಿ ಅಂಗೀಕರಿಸಿ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು. (ಗೊತ್ತುವಳಿ ಸ್ವೀಕರಿಸಿದ 30 ದಿನಗೊಳಗೆ ಮೇಲಾಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಸದಸ್ಯ ಕಾರ್ಯದರ್ಶಿ ಎಸ್.ಡಿ.ಎಂ.ಸಿ ಗೆ ತಿಳಿಸಬೇಕು.)
 8. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ  ಸಾಂದರ್ಭಿಕ ಹಾಗೂ ನಿರ್ಬಂಧಿತ ರಜೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು ಮಂಜೂರು ಮಾಡುವುದು.
 9. ಒಂದು ವರ್ಷದಲ್ಲಿ ನಾಲ್ಕಕ್ಕೆ ಮೀರದಂತೆ ಸ್ಥಳೀಯ ರಜೆಗಳನ್ನು ನಿರ್ಧರಿಸುವುದು.
 10. ವಿಜ್ಞಾನೋಪಕರಣಗಳು, ಕಲಿಕೆಯ ಸಾಧನಗಳು, ಪೀಠೋಪಕರಣಗಳು,ಆಟದ ಸಾಮಗ್ರಿಗಳು, ನಕಾಶೆಗಳು, ಚಾರ್ಟ್ ಗಳು, ವಾಚನಾಲಯದ ಪುಸ್ತಕಗಳು ಇತ್ಯಾದಿ ಸಾಮಾಗ್ರಿಗಳು ನಿರುಪಯುಕ್ತವೆಂದು ಕಂಡುಬಂದಲ್ಲಿ ಅದೇ ರೀತಿ  ಘೋಷಿಸಬಹುದು (ಹತ್ತು ಸಾವಿರ ಮಿತಿಯೊಳಗೆ) ಈ ರೀತಿ ಘೋಷಿಸಿದ ಪೀಠೋಪಕರಣಗಳನ್ನು ಹರಾಜು ಮಾಡಿ ಬಂದ ಹಣವನ್ನು ಶಾಲೆಯ ಎಸ್.ಡಿ.ಎಂ.ಸಿ ಖಾತೆಗೆ ಜಮಾ ಮಾಡುವುದು.
 11. ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳು,ರಾಜ್ಯದೊಳಗಿನ ಶೈಕ್ಷಣಿಕ ಪ್ರವಾಸಗಳು, ಬೇರೆ ರೀತಿಯ ಸಂದರ್ಶನಗಳು ಇತ್ಯಾದಿಗಳನ್ನು ಸಂಘಟಿಸಲು ಅನುಮತಿ ನೀಡುವುದು.
 12. ಶಾಲೆಯು ದಾನವಾಗಿ ಸ್ವೀಕರಿಸಿದ ಹಾಗೂ ಖರ್ಚು ಮಾಡಿದ ಹಣದ ಲೆಕ್ಕಪತ್ರಗಳನ್ನು ಹಾಗೂ ತತ್ಸಂಬಂಧಿಯಾದ ದಾಖಲೆಗಳನ್ನು ಪರಿಶೀಲಿಸುವುದು.
 13. ವಾಚನಾಲಯ ನಿಧಿ, ಕ್ರೀಡಾ ನಿಧಿ, ಪ್ರಯೋಗಾಲಯ ನಿಧಿ, ಇತ್ಯಾದಿ ಸರ್ಕಾರೇತರ  ನಿಧಿಗಳ ಅನುಮೋದನೆಯನ್ನು ನಿಯಮಾನುಸಾರ ಮಾಡುವುದು.
 14. ಶಾಲೆಯ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಅಗತ್ಯವಿದ್ದಷ್ಟು ಮಧ್ಯಾಹ್ನದ ಊಟಕ್ಕೆ ಬಳಸಿ, ಹೆಚ್ಚುವರಿ ಇದ್ದಲ್ಲಿ ಹರಾಜು ಮಾಡಿ ಶಾಲೆಯ ಎಸ್.ಡಿ.ಎಂ.ಸಿ. ಖಾತೆಗೆ ಜಮಾ ಮಾಡುವುದು.
 15. ತಾಲ್ಲೂಕು ಪಂಚಾಯತ್,  ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ವಲಯದಿಂದ ಬಿಡುಗಡೆಯಾಗುವ ಹಣದಲ್ಲಿ ಶಾಲೆಗೆ ಬೇಕಾಗುವ ಸಾಧನಾ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಸಂಬಂಧಿಸಿದ ಮುಖ್ಯಗುರುಗಳಿಗೆ ಅನುಮೋದನೆ ನೀಡುವುದು.
 16. ಎಸ್.ಡಿ.ಎಂ.ಸಿ ಯ ಎಲ್ಲಾ ಸದಸ್ಯರು ತಮಗೆ ದೊರೆತಿರುವ ಅಧಿಕಾರವನ್ನು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಬಳಸುವ ಮೂಲಕ ಶಾಲೆಯನ್ನು ಗುಣಾತ್ಮಕ ಕಲಿಕಾ ಕೇಂದ್ರವಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಎಸ್.ಡಿ.ಎಂ.ಸಿ ಯ ಕರ್ತವ್ಯಗಳು :

 • ಆರ್ಥಿಕ ವರ್ಷ ಅಂತ್ಯವಾಗುವ 3 ತಿಂಗಳು ಮೊದಲೇ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು 3 ವರ್ಷಗಳ ದೂರ ದೃಷ್ಟಿಯ ಶಾಲಾ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಅನುಮೋದನೆಗಾಗಿ ಸಿ.ಆರ್.ಪಿ.ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿಕೊಡುವುದು. ಶಾಲೆಯ ಮುಖ್ಯ ಶಿಕ್ಷಕರು ಸದಸ್ಯ ಕಾರ್ಯದರ್ಶಿಯಾಗಿ ಶಾಲಾಭಿವೃದ್ಧಿ ಯೋಜನೆ ಸಿದ್ಧಪಡಿಸಲು ಎಸ್.ಡಿ.ಎಂ.ಸಿ ಸಹಕರಿಸುವುದು.
 • ಶಾಲಾ ವ್ಯಾಪ್ತಿಯಲ್ಲಿ  ಬರುವ 14 ವರ್ಷದೊಳಗಿನ ಎಲ್ಲಾ ಮಕ್ಕಳ ನಿಖರ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ನೀಡುವುದು.
 •  ಶಾಲೆಯಿಂದ ಹೊರಗುಳಿದಿರುವ ಎಲ್ಲಾ ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ತರುವುದು.
 • 14 ವರ್ಷದೊಳಗಿನ ಎಲ್ಲಾ ಮಕ್ಕಳು ಪ್ರಾಥಮಿಕ ಶಿಕ್ಷಣ ಪೂರೈಸುವವರೆಗೆ ನಿಯಮಿತವಾಗಿ ಶಾಲೆಗೆ ಹಾಜರಾಗಲು ಕ್ರಮವಹಿಸುವುದು.
 • ಸರ್ಕಾರದಿಂದ ಉಚಿತವಾಗಿ ನೀಡುವ ಪಠ್ಯಪುಸ್ತಕ, ಸಮವಸ್ತ್ರ, ಶಾಲಾ ಬ್ಯಾಗ್, ನೋಟ್  ಪುಸ್ತಕ, ಸೈಕಲ್, ವಿದ್ಯಾರ್ಥಿ ವೇತನ, ಬಿಸಿ ಊಟ ಇತ್ಯಾದಿ ಉತ್ತೇಜನಕಾರಿ ಸೌಲಭ್ಯಗಳು ಶಾಲೆಯ ಎಲ್ಲಾ ಮಕ್ಕಳಿಗೆ ಸಕಾಲಕ್ಕೆ ಸಿಗುವಂತೆ ಮೇಲ್ವಚಾರಣೆ ಮಾಡುವುದು.
 • ಮಕ್ಕಳ ಕಲಿಕೆಯ ನಿರಂತರ  ಮೌಲ್ಯಮಾಪನಗಳನ್ನು ಆಧರಿಸಿ ಕಲಿಕೆಯನ್ನು ಅಭಿವೃಧ್ಧಿಪಡಿಸಲು ಅವಶ್ಯಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
 • ಶಾಲಾ ಆಸ್ತಿಯನ್ನು ನಿರ್ವಹಿಸುವುದು ಮತ್ತು ಸಂರಕ್ಷಿಸುವುದು.
 • ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಹಾಜರಾಗಲು ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.
 • ಮಕ್ಕಳು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ‘’ಮಕ್ಕಳ ಸಹಾಯವಾಣಿ’’ ಸಂಖ್ಯೆ 1098 ನ್ನು ಪ್ರದರ್ಶಿಸುವುದು ಮತ್ತು ಪ್ರಚಾರ ಮಾಡುವುದು.
 • ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.
 • ಶಾಲೆಯ ಆವರಣವನ್ನು ಹಾಗೂ ಕಟ್ಟಡವನ್ನು ಅತಿಕ್ರಮಣ ಹಾಗೂ ವಿನಾಶಗಳಿಂದ ಕಾಪಾಡುವುದು.
 • ಶೈಕ್ಷಣಿಕ ವರ್ಷದಲ್ಲಿ 220 ಕಲಿಕಾ ದಿನಗಳು ಮತ್ತು ಪ್ರತಿ ದಿನ ಐದೂವರೆ ಗಂಟೆಗಳು ಶಾಲೆ ನಡೆಯುವುದನ್ನು ಖಾತರಿಪಡಿಸಿಕೊಳ್ಳುವುದು.
 • ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಲಾಖೆಯಿಂದ ಏರ್ಪಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು. (ವಿಜ್ಞಾನ ಮೇಳ, ಶೈಕ್ಷಣಿಕ ಪ್ರವಾಸ, ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆಗಳು,ಕ್ರೀಡಾ ಕೂಟಗಳು, ಶಾಲಾ ಸಂಸತ್ತು, ವಿಜ್ಞಾನ ಕ್ಲಬ್, ಎಕೋ ಕ್ಲಬ್, ಹದಿಹರೆಯದ ಶಿಕ್ಷಣ ಇತ್ಯಾದಿ..)
 • ವರ್ಷದಲ್ಲಿ ಮೂರು ಸಲ ಅಂದರೆ ಜುಲೈ, ನವೆಂಬರ್,ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪೋಷಕರ ಸಭೆಗಳನ್ನು ಆಯೋಜಿಸುವುದು.
 • ಶಾಲೆಗೆ ಮಂಜೂರಾದ ಅನುದಾನಗಳನ್ನು ನಿಯಮಾನುಸಾರ ಬಳಸಲು ಕಾಲಕಾಲಕ್ಕೆ ಅನುಮೋದನೆ ನೀಡಿ ಸಮರ್ಪಕವಾಗಿ ಬಳಕೆಯಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದು.
 • ಶಾಲೆಗೆ ಸಂಬಂಧಿಸಿದ ಎಲ್ಲಾ ಕಾಮಗಾರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುವುದು.
 • ದಾನಿಗಳನ್ನು ಗುರುತಿಸಿ ಅವರನ್ನು ಸಂಪರ್ಕಿಸಿ, ಶಾಲೆಯನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸುವುದು.
 • ಎಸ್.ಡಿ.ಎಂ.ಸಿ ಯು ಶಾಲೆಯಲ್ಲಿ ಸಾಮೂಹಿಕವಾಗಿ ಮತ್ತು ವಿಕೇಂದ್ರೀಕರಣ ತತ್ವದಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅಗತ್ಯವಿರುವ ಕಡೆ ವಿವಿಧ ಸಮಿತಿಗಳನ್ನು ರಚಿಸಿಕೊಳ್ಳಬಹುದು. ಉದಾಹರಣೆಗೆ: ಅಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ಸಾಂಸ್ಕೃತಿಕ ಸಮಿತಿ ಇತ್ಯಾದಿ...
 • ಶಾಲೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುವುದು.
 • ಶಿಕ್ಷಣ ಹಕ್ಕು ಕಾಯ್ದೆಯ ಬಗ್ಗೆ ಹಾಗೂ ನೆರೆಹೊರೆ ಶಾಲೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು.
 • ಶಾಲಾ ಶಿಕ್ಷಕರು ಖಾಸಗಿಯಾಗಿ ಮನೆ ಪಾಠ ಮಾಡದಂತೆ ಕ್ರಮವಹಿಸುವುದು.
 • ಅಧಿನಿಯಮ 27 ರಲ್ಲಿ ನಿರ್ದಿಷ್ಟಪಡಿಸಿರುವ ಅಂಶಗಳನ್ನು ಹೊರತುಪಡಿಸಿ ಶಿಕ್ಷಣೇತರ ಕರ್ತವ್ಯಗಳಿಂದ ಶಿಕ್ಷಕರಿಗೆ ಹೊರೆಯಾಗದಂತೆ ಮೇಲ್ವಿಚಾರಣೆ ಮಾಡುವುದು.ಶಿಕ್ಷಕರ ಕುಂದುಕೊರತೆಗಳನ್ನು ಪ್ರಥಮ ಹಂತದ ಸ್ಥಳೀಯ ಪ್ರಾಧಿಕಾರವಾಗಿ ಆಲಿಸಿ ವಿಲೇವಾರಿ ಮಾಡುವುದು.
 • ಜಾತಿ, ಮತ, ಧರ್ಮ, ಭಾಷೆ. ಲಿಂಗ, ವಿಕಲಚೇತನ ಹಾಗೂ ಹುಟ್ಟದ ಸ್ಥಳ, ಇವುಗಳ ಮೇಲೆ ಯಾವುದೇ ರೀತಿಯ ತಾರತಮ್ಯ ಆಗದಂತೆ, ದೈಹಿಕ ಶಿಕ್ಷೆ ಇಲ್ಲದ ಶಿಶುಸ್ನೇಹಿ ವಾತಾವರಣ ತರಗತಿಗಳಲ್ಲಿ ಮೂಡುವಂತೆ ವ್ಯವಸ್ಥೆ ಮಾಡುವುದು.
 • ಪ್ರತಿ ವರ್ಷ ಮಾರ್ಚ್ 31 ಕ್ಕೆ ಅಂತ್ಯವಾಗುವಂತೆ ಶಾಲೆಯ ಲೆಕ್ಕಪತ್ರ ಅಂದರೆ ಜಮಾ ಮತ್ತು ಖರ್ಚುಗಳ ಪಟ್ಟಿಯನ್ನು ಸಿದ್ಧಪಡಿಸಿ  ಆ ವರ್ಷದ ಜೂನ್ ತಿಂಗಳ ಅಂತ್ಯದೊಳಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅನುಮೋದನೆ ಪಡೆದು, ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸುವುದು.

ನಾಗರೀಕ ಸೌಕರ್ಯ ಸಮಿತಿ(ಸಿ..ಸಿ) ಎಂದರೇನು:

       ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಮೂರು ಸ್ಥಾಯಿ ಸಮಿತಿಗಳನ್ನು ರಚಿಸಲಾಗಿರುತ್ತದೆ. ಅವುಗಳೆಂದರೆ:

 1. ಉತ್ಪಾದನಾ ಸಮಿತಿ,
 2. ಸಾಮಾಜಿಕ ನ್ಯಾಯ ಸಮಿತಿ,
 3. ನಾಗರಿಕ ಸೌಕರ್ಯ ಸಮಿತಿ(ಸಿಎಸಿ)

ಪಂಚಾಯಿತಿ ವ್ಯಾಪ್ತಿಯಲ್ಲಿನ ಶಿಕ್ಷಣ, ಸಾರ್ವಜನಿಕ ಆರೋಗ್ಯ, ಹಾಗೂ ಇತರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಜವಾಬ್ದಾರಿಯನ್ನು ಹೊತ್ತಿರುವ ಸಮಿತಿಯನ್ನು ನಾಗರೀಕ ಸೌಕರ್ಯ ಸಮಿತಿ(ಸಿಎಸಿ) ಎಂದು ಕರೆಯಲಾಗಿದೆ. ಮೂರರಿಂದ ಐದು ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು ಒಳಗೊಂಡ  ಸಮಿತಿಗೆ ಪಂಚಾಯಿತಿ ಅಧ್ಯಕ್ಷರೇ ಪದನಿಮಿತ್ತ ಸದಸ್ಯರು ಮತ್ತು ಸಭಾಪತಿಯಾಗಿರುತ್ತಾರೆ.

ಎಸ್.ಡಿ.ಎಂ.ಸಿ ಯು ನಾಗರೀಕ ಸೌಕರ್ಯಗಳ ಸಮಿತಿಯ ಭಾಗವಾಗಿ ಕೆಲಸ ನಿರ್ವಹಿಸುತ್ತದೆ. ಸಿ..ಸಿ ಯು ಶಾಲಾ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಎಸ್.ಡಿ.ಎಂ.ಸಿ ಮತ್ತು ಗ್ರಾಮ ಪಂಚಾಯಿತಿ ನಡುವೆ ಸಮನ್ವಯ ತರುವುದು.

 

Designed & Developed by eGovernance Unit,Department Of Public Instuction Bengaluru