Skip to content
ಮುಖಪುಟ >> ಮಧ್ಯವರ್ತನೆ >> ಸಮನ್ವಯ ಶಿಕ್ಷಣ(ಐ.ಇ.ಡಿ.ಎಸ್.ಎಸ್)

ಸಂಕ್ಷಿಪ್ತ ಪರಿಚಯ

ಪ್ರೌಢಶಾಲಾ ಹಂತದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣ(ಐ.ಇ.ಡಿ.ಎಸ್.ಎಸ್):

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಕಲತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಗಮನಹರಿಸಿ ಅವರಿಗೆ ಪ್ರೌಢಶಿಕ್ಷಣ ಪಡೆಯಲು ಸಹಕರಿಸುವುದು ಮತ್ತು ಅವರಿಗೆ ತಮ್ಮಲ್ಲಿ ಹುದುಗಿರುವ ಕೌಶಲವನ್ನು ಗುರುತಿಸಿ ಅಭಿವೃದ್ಧಿ ಪಡಿಸಿಕೊಳ್ಳಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸುವುದು.

ಗುರಿಗಳು

  • ಒಂದು ಅಥವಾ ಅದಕ್ಕಿಂತ ಹೆಚ್ಚಿನ ನ್ಯೂನತೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಉತ್ತಮ ಪರಿಸರ ಕಲ್ಪಿಸಿರುವ ಸಾಮಾನ್ಯ ಶಾಲೆಗಳಲ್ಲಿ ಪಡೆಯಲು ಅವಕಾಶ ಕಲ್ಪಿಸುವುದು.
  • ಸಾಮಾನ್ಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.
  • ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಗತ್ಯವಿರುವ ವಿಶೇಷ ಅಂಶಗಳು ಅವರ ಬಗ್ಗೆ ತೆಗೆದುಕೊಳ್ಳಬೇಕಾದ ಜಾಗರೂಕತೆಗಳ ಬಗ್ಗೆ ಸಾಮಾನ್ಯ ಶಿಕ್ಷಕರಿಗೆ ತರಬೇತಿ ಒದಗಿಸುವುದು.

ಉದ್ದೇಶಗಳು

  • ಪ್ರತಿಯೊಂದು ಮಗುವಿನ ವಿಕಲತೆಯನ್ನು ಪ್ರೌಢಶಾಲಾ ಹಂತದಲ್ಲಿ ಗುರುತಿಸುವುದು ಮತ್ತು ಆ ಮಗುವಿನ ಶೈಕ್ಷಣಿಕ ಅಗತ್ಯತೆಗಳನ್ನು ಗುರುತಿಸುವುದು.
  • ಪ್ರತಿಯೊಂದು ಮಗುವಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಒದಗಿಸುವುದು.
  • ವಿಕಲಚೇತನ ಮಕ್ಕಳಿಗೆ ಚಲನವಲನಗಳಿಗೆ ಅನುಕೂಲ ಒದಗಿಸುವಂತೆ ತರಗತಿಗಳಲ್ಲಿ, ಗ್ರಂಥಾಲಯಗಳಲ್ಲಿ ಪ್ರಯೋಗಾಲಯ ಮತ್ತು ಶೌಚಾಲಯಗಳಲ್ಲಿ ಅಗತ್ಯ ಭೌತಿಕ ಬದಲಾವಣೆ/ದುರಸ್ಥಿ ಮಾಡಿಸುವುದು(Barrier Free Environment).
  • ಪ್ರತಿ ಮಗುವಿನ ನ್ಯೂನತೆಗೆ ಅನುಗುಣವಾಗಿ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು.
  • ವಿಕಲಚೇತನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬ್ಲಾಕ್ ಹಂತದಲ್ಲಿ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಮತ್ತು ಸಂಪನ್ಮೂಲ ಕೊಠಡಿಗಳನ್ನು ಬಲವರ್ಧನೆಗೊಳಿಸುವುದು.

ವಿಶೇಷ ಸೌಲಭ್ಯಗಳು

1]ವೈದ್ಯಕೀಯ ತಪಾಸಣೆ : 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆಯನ್ನು ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎ. ಸಹಯೋಗದೊಂದಿಗೆ ನಡೆಸಲಾಗುತ್ತಿದೆ.

2]ಸಾಧನ ಸಲಕರಣೆಗಳು: ವೈದ್ಯಕೀಯ ಶಿಫಾರಸ್ಸಿನಂತೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಜಿಲ್ಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗುತ್ತಿದೆ.

3]ಸಾರಿಗೆ ಭತ್ಯೆ: ತೀವ್ರ ನ್ಯೂನತೆಯ ಕಾರಣದಿಂದ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆ ಬಿಡುವ ಸಾಧ್ಯತೆ ಇದ್ದು, ಮಕ್ಕಳು ನಿರಂತರವಾಗಿ ಶಾಲೆಗೆ ಹಾಜರಾಗಲು ಸಾರಿಗೆ ಭತ್ಯೆಯನ್ನು ನೀಡಲಾಗುತ್ತಿದೆ.

4]ಬೆಂಗಾವಲು/ಎಸ್ಕಾರ್ಟ್ ಭತ್ಯೆ: ವಿವಿಧ ವೈಕಲ್ಯತೆಯನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಶಾಲೆಗಳಿಗೆ, ಶಾಲಾ ಸಿದ್ಧತಾ ಕೇಂದ್ರಗಳಿಗೆ ಹಾಗೂ ಸಂಪನ್ಮೂಲ ಕೇಂದ್ರಗಳಿಗೆ ಕರೆತರುವ ಪೋಷಕರಿಗೆ/ಸ್ವಯಂ ಸೇವಕರಿಗೆ ಈ ಭತ್ಯೆಯನ್ನು ವಿತರಿಸಲಾಗುತ್ತಿದೆ.

5]ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆ: ವಿಶೇಷ ಅಗತ್ಯವುಳ್ಳ ಹೆಣ್ಣು ಮಕ್ಕಳು ಹೆಚ್ಚಿನ ಬೇಧ ಭಾವವನ್ನು ಅನುಭವಿಸುತ್ತಿದ್ದು ಹಾಗೂ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ವಿಶೇಷ ಭತ್ಯೆಯನ್ನು ವಿತರಿಸಲಾಗುತ್ತಿದೆ.

6]ರೀಡರ್ ಭತ್ಯೆ: ಪೂರ್ಣ ಅಂಧ ವಿದ್ಯಾರ್ಥಿಗಳಿಗೆ ಸಹಕರಿಸುವ ಸಹವಿದ್ಯಾರ್ಥಿಗಳು, ಹತ್ತಿರದ ಸಂಬಂಧಿ ಇವರಿಗೆ ಈ ಭತ್ಯೆಯನ್ನು ವಿತರಿಸಲಾಗುತ್ತಿದೆ.

7]ಥೆರೆಪೆಟಿಕ್ ಸೇವೆಗಳು: ವಿಕಲ ಚೇತನ ಮಕ್ಕಳಲ್ಲಿ ದೈಹಿಕ ನ್ಯೂನತೆ ಮತ್ತು ಬಹುನ್ಯೂನತೆಯುಳ್ಳ ಮಕ್ಕಳಿಗೆ ಥೆರೆಪೆಟಿಕ್ ಸೇವೆಯನ್ನು ಎಸ್.ಎಸ್.ಎ ಸಹಯೋಗದೊಂದಿಗೆ ನೀಡಲಾಗುತ್ತಿದೆ.

8]ಬಲವರ್ಧನೆ ಚಟುವಟಿಕೆಗಳು: ವಿಶ್ವ ಅಂಗವಿಕಲರ ದಿನಾಚರಣೆಯನ್ನು ದಿನಾಂಕ:03-12-2017ರಂದು ಪ್ರತಿ ಶೈಕ್ಷಣಿಕ ಬ್ಲಾಕ್ ನಲ್ಲಿ ಎಸ್.ಎಸ್.ಎ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

9]ವಿಶೇಷ ಸಂಪನ್ಮೂಲ ಶಿಕ್ಷಕರಿಗೆ ವೇತನ: ವಿಶೇಷ ಬಿ.ಇಡಿ ಹೊಂದಿರುವ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರನ್ನು ಪ್ರತಿ ಬ್ಲಾಕ್ ಗೆ ಇಬ್ಬರಂತೆ, ಸೇವೆಯನ್ನು ಪಡೆಯಲು ಜಿಲ್ಲಾ ಹಂತದಲ್ಲಿ ಕ್ರಮ ಕೈಗೊಳ್ಳಲು ಮಾರ್ಗಸೂಚಿಯನ್ನು ಕಳುಹಿಸಲಾಗಿದೆ.

10]ವಿಶೇಷ ಸಂಪನ್ಮೂಲ ಶಿಕ್ಷಕರಿಗೆ ವಿಶೇಷ ಭತ್ಯೆ: ವಿಶೇಷ ಬಿ.ಇಡಿ ಹೊಂದಿರುವ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ನೀಡಲಾಗುವುದು.

11]ಆಡಳಿತ ಹಾಗೂ ಮೇಲುಸ್ತುವಾರಿ ಅಧಿಕಾರಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ತರಬೇತಿ: ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಾಮಾನ್ಯ ಮಕ್ಕಳೊಂದಿಗೆ ಸಮನ್ವಯಗೊಳಿಸಲು ಹಾಗೂ ನಿರ್ವಹಿಸುವ ಬಗ್ಗೆ ಬ್ಲಾಕ್ ಹಂತದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್